Mamta Sagar (ಮಮತಾ ಸಾಗರ್)
ಮಳೆ
ಮಳೆ
ಮುಸು ಮುಸು ಅಳುವ ಮನಸಿನ ಹಾಗೆ
ನಿಂತು ನಿಂತು ಬಿಕ್ಕುವ ಮಳೆ.
ದುಗುಡ ದುಮ್ಮಾನದಾಲಿಕಲ್ಲು
ಭೋರ್ಗರೆವ ಮಳೆ.
ದುಃಖ ಉಮ್ಮಳಿಸಿ ಧೋ ಅಂತ
ಸುರಿವ ಸೋನೆ ಮಳೆ.
ಹರಿದ ಚಿಂದಿ ಮನಸಿಗೆ ತೇಪೆ
ಹಚ್ಚುವ ಸೂಜಿದಾರದೆಳೆ ಮಳೆ.
ನನ್ನ ಹಾಡಿನ ಜಾಡು
ಜಡಿ ಮಳೆ.
ಬರೆದಿಟ್ಟ ಸಾಲುಗಳು
ಪದ..
ಪದ..
ಪದ..
ಮಳೆಯಾಗಿ ಸುರಿದು,
ಹಾಡು ಹರಿದು,
ಊರೆಲ್ಲ ತೊಯ್ದು.....
ಮಕ್ಕಳು ಮಳೆಯಲ್ಲಿ ಮಳೆಯಾಗಿ
ಹುಡುಕುತ್ತಾರೆ ನನ್ನ,
ತೊಪ್ಪೆ ತೊಯ್ದು ನೀರಲ್ಲಿ
ನೆನೆಸುತ್ತಾರೆ ನನ್ನ ಹಾಡನ್ನ,
ಅವರ ತುಟಿ ಮೇಲೆ ಹಸಿ ಹಸಿ
ನಗುತ್ತದೆ ನಾ ಬರೆದ ಸಾಲು.
ಮತ್ತೆ ಮಳೆ!
ಹನಿ ಹನಿ ಸುರಿವ ಅಕ್ಷರಗಳ ಹಾಗೆ
ಎಳೆ ಎಳೆಯಾಗಿ ಸುರಿದು
ಹರಿಯುತ್ತದೆ ಹಾಡು.