ಹೇ ಬಂದೇ ನವಾಜ್


ಈ ವಿಷವನ್ನು ಪೇಯದಂತೆ ಕುಡಿಯಲು ಬಿಡು,

ಒಂದು ತೊಟ್ಟೂ ನೆಲದಲ್ಲಿ ಹಿಂಗದಂತೆ.

ಈಗಿಂದೀಗಲೇ ಬಿಕ್ಷೆಯ ಬಟ್ಟಲನ್ನು ಹಿಡಿದು ನಡೆವ ಧೈರ್ಯ ಕೊಡು.ಈ ಗಿಡುಗನ ಉಡುಪನ್ನು ಕಳಚಿ ಬಿಡುವೆನು

ಪಾರಿವಾಳದ ದಿರಿಸನ್ನು ತೊಡಿಸು ನನಗೆ ಹೇ ಬಂದೇನವಾಜ್.

ನಿನ್ನ ಪಹಾಡಿನ ಹರಳು, ನಿನ್ನ ವನದ ಸಂಪಿಗೆಯ ಕರಿಯ ಬೀಜ,

ನಿನ್ನ ಫಕೀರರ ಹಾಡು,ಚಿಲುಮೆಯ ಹೊಗೆ,ಕೈಯ ಕೋಳ, ಕಾಲ ಕಡಗ,

ನಿನ್ನ ಹತ್ತೂ ಬೆರಳಿನ ಮಾಯದುಂಗುರ ?

ನನ್ನ ಇಲ್ಲದಂತಾಗಿಸು ಹೇ ಬಂದೇ ನವಾಜ್.

 

 ನಿನ್ನ ಗೋರಿಗಳ ನಡುವೆ ಹಾಲು ಊಡುತ್ತ,ಕಾಲು ಆಡಿಸುತ್ತ ಮಲಗಿರುವ ಮಗುವಿನ ನಗು.

ಹಾಲ ಊಡಿಸುತ್ತಿರುವ ಮುಸುಕಿನೊಳಗಿನ ಕಣ್ಣುಗಳ ಕಳ್ಳ ಆಟ.

ನಿನ್ನ ಗೋಡೆಗಳಿಗೆ ತಲೆ ಘಟ್ಟಿಸಿಕೊಳ್ಳುತ್ತಿರುವ ತಲೆಕೆಟ್ಟ ಹೆಣ್ಣುಮಗಳ ಚೀತ್ಕಾರ.

ಈ ಸ್ಮಶಾನದ ಆನಂದವನ್ನು ಅನುಭವಿಸಲು ಬಿಡು, ಹೇ ಬಂದೇ ನವಾಜ್.

ಈಗಿಂದೀಗಲೇ ಬಿಕ್ಷಾಪಾತ್ರವನ್ನು ಹಿಡಿದು ನಡೆವ ಧೈರ್ಯ ಕೊಡು.

ಕನಸಲ್ಲಿ ನಿನ್ನ ಖರಪುಟಗಳ ಸದ್ದು,ಆಕಾಶದಲ್ಲಿ ಹಾಹಾಕಾರ,

ಒಡೆದಕಾಲುಗಳ ಸವರುತಿರುವ ಎಳ್ಳು ಹೂವುಗಳ ಪರಾಗ,ನಸುನಗು,ಕದ್ದು ಕೂಡಿರುವ ಜವ್ವನಿಗರ

ಪಿಸುಮಾತು,ಎಲ್ಲಿಂದಲೋ ಎದ್ದು ನಿಂತಿರುವ ಅರೆ ಕಳಾಹೀನ ಚಂದ್ರ,

ಈಗ ತಾನೇ ಮೈಕೊಟ್ಟು ಬಂದಿರುವ ವಕ್ರಮೂಗಿನ ಬಿಕ್ಷುಕಿಯಮಿಂಚುತಿರುವ ಮೂಗ ನತ್ತು-

 ನಾ ಪರಾದೀನ.ನಿನ್ನ ಪಾದಗಳಲಿ ಹಣೆಯಿಟ್ಟು ಚುಂಬಿಸುತಿರುವೆ ನನ್ನನೇ ನಾನು.

ಈ ಆನಂದವನು ನನ್ನೊಳಗೂ ಹರಿದು,ಹೊರಗೂ ಇಳಿದು

ಈ ಅರೆ ಚಂದ್ರ ಇರುಳು ಈ ನಕ್ಷತ್ರ ರಾತ್ರಿ,ಈ ಮಿಂಚಿಲ್ಲದ ಸದ್ದಿಲ್ಲದ ಆಗಸದಲ್ಲಿ ತೋರಿಸು ನಿನ್ನ ಇರವು

ನಿನ್ನ ಗಾಳಿ ನಿನ್ನ ಬೆಳಕು,ನಿನ್ನ ಊರಿದ ಪಾದದ ಕೆಳಗೆ ಅಗಾಧಮುಳ್ಳಿನ ಪಾದುಕೆ ಈ ಭೂಮಿ.

ನಿನ್ನ ಶಹರಿನ ಬೀದಿಗಳಲ್ಲಿ ಅನವರತ ಅಲೆಯುವ ಪ್ರೇತಾತ್ಮರು ನಿನ್ನ ಸಖಿಯರು

ಬೊಗಸೆಯಲ್ಲಿ ಹರಿವ ಬೆಂಕಿ, ಚೆಲುವ ಚೆಲ್ಲುತ್ತ ಹಸಿಯ ಮಾಂಸ ನೆತ್ತರು ಹೊತ್ತು ನಡೆಯುತ್ತಿರುವಈ ಚೆಲುವೆಯರು.ಆಹಾ ಇವರ ಕಣ್ಣುಗಳು.ಇವರ ಗಾಢ ಬೆವರು.

ನಿನ್ನ ಮಣ್ಣ ಹಿಡಿ ದೂಳ ಕದಲಿಸದೆಚಲಿಸುತ್ತಿರುವ ಇವರ ಪಾದ ಪಕ್ಷಿಗಳು.

ಕಣ್ಣಿಂದ ಕಾಣಿಸುತ್ತಿರುವ ಎಲ್ಲವ ಇಲ್ಲದಂತಾಗಿಸು ಹೇ ಗೇಸುದರಾಜ್

ನಾ  ಇಲ್ಲಿಂದ ಹೋಗುತಿರುವೆನು,

ಇಲ್ಲದ ಆ ಇನ್ನೊಂದು ಶಹರಿನ ದಾರಿ ತೋರಿಸು,

ಹೇ ಬಂದೇ ನವಾಜ್.

© Abdul Rasheed
Audio production: Goethe Institut, 2015