ಕಂಪು

ಸುರಗಿ ಹೂವಿನ ಕಂಪು
ಮಳೆಯ ಮಣ್ಣಿನ ಕಂಪು
ಒಲೆಯೊಳಗೆ ಸುಟ್ಟ ಗೇರು ಬೀಜದ ಕಂಪು
ಎಲ್ಲಿಂದ ಸುಳಿದಿತ್ತು ಈ ಕಂಪು
ಒಂದೇ ಕ್ಷಣ ಧಿಗ್ಗನೆದ್ದು ಮುಳುಗಿತ್ತು.

ಘಳಿಗೆಗೊಂದು ವಾಸನೆ
ಎಂದೋ ಎಲ್ಲೋ ಆಗಿದ್ದು
ತಟ್ಟನೆ ವಾಸ್ತವಕ್ಕಿಳಿದ ಹಾಗೆ 
ಮರೆತ ಏನೇನ್ನೋ ಮತ್ತೆ
ಕರೆದಹಾಗೆ.

ಮಹಡಿ ಮೆಟ್ಟಿಲ ಹಿಂದೆ
ಕತ್ತಲಲಿ ಅವಿತು ಕೂತಿದ್ದು
ಹೊಡೆದುಕೊಳ್ಳುವ ಎದೆಯ
ಬಿಗಿ ಹಿಡಿದು ಬಿಕ್ಕದೆ ಅತ್ತಿದ್ದು
ಜಗಲಿ ಬದಿ ಮಬ್ಬಿಗೆ ಮುಖ ಕೊಟ್ಟು
ಸಂಜೆ ಸುಮ್ಮನೆ ಕೂತು ಕಳೆದಿದ್ದು.

 ಇದು ಯಾವ ನೆನಪು
ಗಾಳಿ ಬೀಸಿದ ಹಾಗೆ;
ಹೀಗೆ ಮೇಲಿಂದಮೇಲೆ
ರೆಪ್ಪೆ ಮಿಟುಕಿಸದಹಾಗೆ
ಕಣ್ಣು ಮುಚ್ಚಿದರೆ ಚಿತ್ರಗಳು
ಭಿತ್ತಿಯಲೆ ಬೆರತು,
ಕಂಡಿದ್ದು,
ಕಾಣದ್ದು,
ಎಲ್ಲ ರಾಶಿ ರಾಶಿ........

ಮೋಡದಲಿ ಮುಳಗಿದ ಹಾಗೆ
ಚಕ ಚಕನೆ ಸರಿದು......

ಯಾರೋ ಕರೆದರು..... ಎಲ್ಲೋ!
ಯಾರು ಕರೆದರು?
ಎಲ್ಲಿ?
ಇದು ಯಾವ ಬಾಗಿಲಿನಗಳಿ
ಕಟ ಕಟ ಸದ್ದು...
ತೆರೆದರೆ ನೂರೆಂಟು ಪ್ರಶ್ನೆ

ಈಗ ಹೊತ್ತೇನು?
ಹೊತ್ತಿಗೆ ಹಿಂದಿಲ್ಲ ಮುಂದಿಲ್ಲ
                ಆದರ ಮ್ಯೆಯ್ಯೆಲ್ಲ ಮರುಕಳಿಸುವ ನೆನಪು.

© Mamta Sagar
Audio production: Literaturwerkstatt Berlin/Haus für Poesie, 2016