ದುಃಖ

ಒಳಗೆ ಹಿಡಿದಿಟ್ಟ ದುಃಖವೆಲ್ಲಾ
ಒಮ್ಮೆಲೇ ಒಡೆದು ಉಕ್ಕಿ ಬಂದಂತೆ
ಧಾರಾಕಾರ ಸುರಿಯುತ್ತಿದೆ ಮಳೆ.

ಪಟ ಪಟ ಹನಿಗಳು ಚಲ್ಲಾಪಿಲ್ಲಿ ಕನಸುಗಳು
ಕೊಚ್ಚಿಹೋದ ನೆನಪುಗಳು... ಧಾರಾಕಾರ ಮಳೆ!!

ಆಕಾಶಕ್ಕೇ ಕೈ ಚಾಚಿ ಹನಿ ಹನಿ ಹಿಡಿದು
ಬೊಗಸೆ ತುಂಬ ಜೋಪಾನ ಮಾಡಿದ ಆಸೆಗಳು
ಬೆರಳ ಸಂದಲ್ಲೇ ಜಾರಿ ಹೋದ ಉಮ್ಮೀದುಗಳು
ತೊಯ್ದು ನೀರಾಗಿ... ಕಣ್ಣ ತುಂಬಿದ ಧಾರಾಕಾರ!!

ತುಟಿ ಬಿರಿದು ಮಾತು ನಗುವಾಗುವ
ಮೊದಲೇ ದಟ್ಟ ಮೋಡದ ಹಾಗೆ ಮೌನ ಕವಿದು
ತುಂತುರು ತುಂತುರು ಕಣ್ಣೀರೂ ಕಾಣದ ಹಾಗೆ
ಸುರಿದು ಮಳೆ ನಖಶಿಖಾಂತ ತೊಟ್ಟಿಕ್ಕುವ ದುಃಖ!!

ಅಂಥ ಮಳೆ! ಇಂಥ ಮಳೆ! ಇದೆಂಥ ಮಳೆ!!
ಈ ಧಾರಾಕಾರ ಮಳೆಯಲ್ಲಿ
ಮುಗಿಲ ಎದೆ ಒಡೆದು
            ನಿಂತ ನೆಲವೆಲ್ಲ ರಾಡಿ ರಾಡಿ!!

© Mamta Sagar
Audio production: Goethe Institut, 2015